Responsive Menu
Add more content here...
ಸ್ತ್ರೀ ವೇಷ ಪಾತ್ರಧಾರಿಯಾಗಿ ಮೆರೆದ ಪರಿ

ಕೋಳ್ಯೂರುರವರು ಸ್ತ್ರೀ ವೇಷದ ವಿವಿಧ ಪ್ರಾಕಾರಗಳ ಅಭಿನಯವನ್ನು ಅಭ್ಯಸಿಸಿ ಮೆರೆದವರು. ರಾಣಿ, ನಾಯಕಿ, ಮಾಯಾಂಗನೆ, ಹಾಗೂ ದಟ್ಟಿಕಸೆ ಮೊದಲಾದ ವೇಷಗಳನ್ನು ಕಲಾ ಪ್ರೇಕ್ಷಕರ ಮನದಾಳದಲ್ಲಿ ಅಚ್ಚಳಿಯದೆ ಇರುವ ರೀತಿಯಲ್ಲಿ ಅಭಿನಯಿಸಿ, ಅನುಭವಿಸಿದವರು. ಉದಾಹರಣೆಗೆ: ದಮಯಂತಿ, ಸೀತೆ, ಸುಭದ್ರೆ, ಮಂಡೋದರಿಯಂತಹ ರಾಣಿಯ ಪಾತ್ರಗಳು; ದೇವಯಾನಿ, ಚಂದ್ರಾವಳಿ, ರಾಧೆ, ರುಕ್ಮುಣೀ, ದಾಕ್ಷಾಯಿಣಿ, ಕೈಕೇಯಿ, ಅಂಬೆ ಇತ್ಯಾದಿ ನಾಯಕಿಯರ ಪಾತ್ರ ; ಮೋಹಿನಿ, ಮೇನಕೆ, ಮಾಯಾ ಶೂರ್ಪನಖಿ, ಹಿಡಿಂಬೆ, ಪೂತನಿ ಮೊದಲಾದ ಮಾಯಾಂಗನೆಯರ ಪಾತ್ರಗಳಲ್ಲದೇ; ಶಶಿಪ್ರಭೆ, ಭ್ರಮರಕುಂತಳೆ, ಪ್ರಮೀಳೆ, ಮೀನಾಕ್ಷಿ ಎಂಬಿತ್ಯಾದಿ ದಟ್ಟಿಕಸೆ ವೇಷಗಳನ್ನು ಧರಿಸಿ ಆಯಾ ಪಾತ್ರಗಳಿಗೆ ಸನ್ನಿವೇಷಕ್ಕೆ ತಕ್ಕಂತೆ ಜೀವವನ್ನು ತುಂಬಿ ಚಾಕಚಕ್ಯತೆಯಿಂದ ಕಲಾಭಿಮಾನಿಗಳ ಮನಸೂರೆಗೊಂಡಂತಹ ಅಪ್ರತಿಮ ಯಕ್ಷಗಾನ ಕಲಾವಿದರಿವರು.

ಶೃಂಗಾರ, ಹಾಸ್ಯ, ಕರುಣಾ, ವೀರ, ರೌದ್ರ, ಭೀಭತ್ಸ, ಅಧ್ಬುತ, ಭಯಾನಕ ಮತ್ತು ಶಾಂತ ಎಂಬ ನವರಸ ಭಾವನೆಗಳ ಅಭಿವ್ಯಕ್ತಿಗಳನ್ನು ಕರಗತ ಮಾಡಿಕೊಂಡು ಆಯಾ ಸ್ತ್ರೀ ಪಾತ್ರಗಳ ಅಭಿನಯಕ್ಕೆ ನೈಜತೆಯನ್ನು ನೀಡಿದವರು. ಮಾತ್ರವಲ್ಲದೆ, ಸ್ರೀ ಪಾತ್ರಗಳಿಗೆ ಅನ್ವಯವಾಗುವಂತಹ ವಾತ್ಸಲ್ಯ, ಪ್ರಣಯ, ಸಂತೋಷ, ಶೋಕ ದಂತಹ ಭಾವನಾತ್ಮಕ ಹಾಗೂ ಅವಮಾನ. ಪ್ರಣಯಭಂಗ, ಪತಿವಿಯೋಗ, ಪುತ್ರ ವಿಯೋಗ, ಬಡತನ ಇತ್ಯಾದಿ ಸ್ಥಿತಿಗಳನ್ನು ತನ್ನ ಪಾತ್ರಾಭಿನಯಗಳಲ್ಲಿ ಅತ್ಯಂತ ಸಹಜವಾಗಿ ಬಿಂಬಿಸಿ ಪ್ರದರ್ಶಿಸುವ ಕಲಾನೈಪುಣ್ಯತೆಯನ್ನು ಹೊಂದಿದವರು ಶ್ರೀ ಕೋಳ್ಯೂರು.

ಇನ್ನೂ ಹೇಳಬೆಕೆಂದರೆ, ಪ್ರಸಂಗಳಲ್ಲಿನ ಪಾತ್ರಗಳ ಸಂವಾದಗಳಿಗೆ (ಮಾತುಗಾರಿಕೆ) ತಕ್ಕಂತೆ ತಾಯಿ, ತಂಗಿ, ಪತ್ನಿ, ಸೇವಕಿ, ಪ್ರೇಯಸಿ, ಸಖಿ, ಅರಸಿ ಇತ್ಯಾದಿ ಭಾವನೆಗಳನ್ನು ಮೈಗೂಡಿಸಕೊಂಡು ಪ್ರಕಟಿಸುವ ಇವರ ಮಾತುಗಾರಿಕೆಯ ಪರಿ, ವಿದ್ಯೆಯನ್ನು ಮೆಚ್ಚದ ಪ್ರೇಕ್ಷಕರಿಲ್ಲ.

ಹಾವ-ಭಾವ-ಅಭಿನಯಗಳನ್ನು ಅತ್ಯಂತ ಶೃದ್ಧೆ, ನಿರಂತರ ತರಭೇತಿ – ಕಲಿಕೆ, ಪರಿಶ್ರಮಗಳಿಂದ ಅರ್ಜಿಸಿಕೊಂಡ ಶ್ರೀ ರಾಮಚಂದ್ರ ರಾಯರು ಯಕ್ಷಗಾನದ ಸ್ತ್ರೀ ಪಾತ್ರಧಾರಿಯಾಗಿ ಶತಮಾನವು ಕಂಡ ಮೇರು ವ್ಯಕ್ತಿತ್ವದ ಕಲಾವಿದರಾಗಿ ಮೂಡಿಬರಲು ಅವರ ಕುಟುಂಬದ ಸದಸ್ಯರ, ಕಲಿಸಿದ ಗುರುಗಳ, ಸಹಕಲಾವಿದರ ಜೊತೆಗೆ ಯಕ್ಷಕಲಾ ಅಭಿಮಾನಿಗಳ ಪ್ರೇರಣೆ, ಸಹಕಾರಗಳು ಮಾತ್ರವಲ್ಲದೆ; ಅವರು ದೈವದತ್ತವಾಗಿ ಪಡೆದಿರುವ ದೇಹದ ಆಕಾರ, ಗಾತ್ರ ಮತ್ತು ಸ್ವರಗಳೂ ಕೂಡ ಕಾರಣೀಭೂತವಾಗಿವೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ವಿಳಾಸ

ಕಲಾಪ್ರಸಾದ, ಅಂಚೆ ಇನ್ನಂಜೆ.
ಶಂಕರಪುರ, ಉಡುಪಿ ತಾಲೂಕು.
ಪಿನ್ ಕೋಡ್ 576122.
ಕರ್ನಾಟಕ ರಾಜ್ಯ. ಭಾರತ.

ಮಿಂಚಿನ ಅ೦ಚೆ

kollyurramachandrarao@gmail.com

ಮೊಬೈಲ್:

+91-8123709799