
ಹುಟ್ಟಿನಿಂದ ಬೆಳೆಯುತ್ತಲೇ ರಂಗಾಭಿನಯ ಮತ್ತು ಮಾತುಗಾರಿಕೆಯ ಕಡೆಗೆ ಆಸಕ್ತಿಯನ್ನು ಬೆಳೆಸುತ್ತಾ ಬಂದ ಕೋಳ್ಯೂರು ರಾಮಚಂದ್ರ ರಾಯರು; ಶಾಲಾ ದಿನಗಳಲ್ಲಿಯೇ ತನ್ನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಶ್ರಿ. ಪುರುಷ ಮಾಸ್ತರ್ ರವರ ಪ್ರೋತ್ಸಾಹ ಮತ್ತು ಕಲಿಕೆಯಿಂದಾಗಿ “ ಪಟ್ಟಾಭಿಷೇಕ ” ನಾಟಕದಲ್ಲಿ “ಕೈಕೇಯಿ” ಪಾತ್ರವನ್ನು ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಅಂದಿನ ಅಧ್ಯಾಪಕರಾಗಿದ್ದ ಶ್ರೀ ಕೃಷ್ಣ ರಾವ್ ರವರ ರಚನೆಯ ತುಳು ನಾಟಕದಲ್ಲಿ “ಎಂಕಮ್ಮ” ನ ಸ್ತ್ರೀ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿ, ಕಲಾಸಕ್ತರ ಮೆಚ್ಚುಗೆಗಳಿಸಿದವರು. ಎಳೆಯ ಪ್ರಾಯದಲ್ಲಿ ಹುಡುಗನಾಗಿದ್ದುಕೊಂಡು ತಾನು ನಟಿಸಿರುವ ಈ ಸ್ತ್ರೀ ಪಾತ್ರಗಳೇ ತನ್ನ ಮುಂದಿನ ವೃತ್ತಿ ಜೀವನದ ಬದುಕಿಗೆ ಬುನಾದಿಯಾಗುತ್ತದೆ ಎಂದು ಭಾವಿಸಿದವರಲ್ಲ ಇವರು.

1945 ನೇ ಇಸವಿ (ಸ್ವಾತಂತ್ರ್ಯ ಪೂರ್ವದಲ್ಲಿ) ಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಮೂಡಬಿದರೆ ಇದರ ಪ್ರಾಂಗಣದಲ್ಲಿನ ಶ್ರೀ ಗಣಪತಿ ದೇವರ ಸಾನಿಧ್ಯದಲ್ಲಿ, ಅಂದಿನ ಪ್ರಸಿದ್ಧ ಯಕ್ಷಗಾನ ವೇಷಧಾರಿ ಶ್ರೀ ಕುಂಬಳೆ ನರಸಿಂಹರವರ ಶಿಷ್ಯ ಮತ್ತು ಹೆಸರುವಾಸಿ ಪುಂಡುವೇಷಧಾರಿ ಶ್ರೀ ಕುಂಬಳೆ ರಾಮಚಂದ್ರರವರ ನೇಪಥ್ಯದಲ್ಲಿ , ಶ್ರೀಯುತ ಕುರಿಯ ವಿಟ್ಠಲ ಶಾಸ್ತ್ರಿಗಳು ಮತ್ತು ಆಗಿನ ಶ್ರೀ ಧರ್ಮಸ್ಥಳ ಮೇಳದ ಇತರೇ ಹಿರಿಯ ಕಲಾವಿದರ ಉಪಸ್ಥಿತಿಯಲ್ಲಿ ಕಾಲಿಗೆ ಗೆಜ್ಜೆ ಕಟ್ಟಿಸಿಕೊಂಡು ಹೆಜ್ಜೆ ಕಲಿಯುವ ಮುಖೇನ ವೃತ್ತಿ ಜೀವನದ ಪ್ರವೇಶವನ್ನು ಮಾಡಿದವರು ಕೋಳ್ಯೂರುರವರು.
ಶ್ರೀಯುತ ಕುರಿಯ ವಿಟ್ಠಲ ಶಾಸ್ತ್ರಿಗಳು, ಬಣ್ಣದ ಮಹಾಲಿಂಗನವರು, ಕುಂಬಳೆ ರಾಮಚಂದ್ರರವರು, ಕಾಡೂರು ರಾಮಭಟ್ಟರು, ಕೋಳ್ಯೂರು ನಾರಾಯಣ ಭಟ್ಟರು, ಕರ್ಗಲ್ಲು ಸುಬ್ಬಣ್ಣ ಭಟ್ಟರು, ಹೊಸಹಿತ್ಲು ಗಣಪತಿ ಭಟ್ಟರು, ಬಳ್ಳಂಬೆಟ್ಟು ಶೀನ ಭಂಢಾರಿಯವರು, (ಮಾಣಂಗಾಯಿ) ಪುತ್ತೂರು ಕೃಷ್ಣ ಭಟ್ಟರು ಮತ್ತಿತರ ಪರಿಣಿತ ಯಕ್ಷಗಾನ ಕಲಾ ವೇಷ ಪಾತ್ರಧಾರಿಗಳು ಮತ್ತು ಪುತ್ತೂರು ಈಶ್ವರಪ್ಪಯ್ಯ (ಭಾಗವತರು) . ಮಾಂಬಾಡಿ ಕುಞ್ಙಣ್ಣ ಶೆಟ್ಟರು (ಸಂಗೀತಗಾರರು), ಕೋಳ್ಯೂರು ನಾರಾಯಣ ಸಪಲ್ಯ (ಮದ್ದಳೆಗಾರರು) ಮೊದಲಾದವರನ್ನು ಒಳಗೊಂಡ ಶ್ರೀ ಧರ್ಮಸ್ಥಳ ಮೇಳದ ತಂಡದಲ್ಲಿ ನಿರ್ವಹಣೆ ಮಾಡುತ್ತಾ ಬಂದರು. ಕೆಲವೇ ಕೆಲವು ದಿನಗಳ ಸತತ ಅಭ್ಯಾಸದ ಫಲವಾಗಿ ನೇರವಾಗಿ “ಬಾಲಗೋಪಾಲ” ರಲ್ಲಿ ಒಬ್ಬ ವೇಷಧಾರಿಯಾಗಿ, ಮೂಡುಬಿದರೆಯ ಲಾವಂತಬೆಟ್ಟು ಮೈದಾನದಲ್ಲಿ ರಂಗ ಮಾದರಿಯ ವೇದಿಕೆಯಲ್ಲಿ ದಿನಂಪ್ರತಿ 48 ದಿನಗಳ ಕಾಲ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಪ್ರಥಮವಾಗಿ ರಂಗಪ್ರವೇಶ. ನಂತರದ ದಿನಗಳಲ್ಲಿ “ಶ್ರೀ ಕೃಷ್ಣ ಲೀಲೆ” ಪ್ರಸಂಗದಲ್ಲಿ “ಬಾಲಕೃಷ್ಣ” ನ ಪಾತ್ರಧಾರಣೆ ಮಾಡಿ ಶ್ರೀಕೃಷ್ಣನು ತನ್ನ ತಂದೆ-ತಾಯಿಗೆ ದರ್ಶನ ನೀಡುವ ಸನ್ನಿವೇಷದ ನಿರ್ವಹಣೆ.

ಕಲಿಕೆಯನ್ನು ಅಲ್ಲಿಗೆ ನಿಲ್ಲಿಸದ ಕೋಳ್ಯೂರರು, ಮೇಳದ ತಿರುಗಾಟದ ನಂತರ ಮಳೆಗಾಲದಲ್ಲಿ ದೇಲಂತಬೆಟ್ಟು, (ಧಮರ್ಸ್ಥಳ-ಕನ್ಯಾನದ ಬಳಿ) ದೇವಸ್ಥಾನದ ವಠಾರದಲ್ಲಿ ಶ್ರೀ ಕುರಿಯ ವಿಟ್ಠಲ ಶಾಸ್ತ್ರಿಗಳು ಮೇಳದ ವೃತ್ತಿಕಲಾವಿದರಿಗೆ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ನಿರಂತರ ಅಭ್ಯಾಸವನ್ನು ಪಡೆದು ಹೆಚ್ಚಿನ ಪರಿಣತಿ ಹೊಂದಿದ ಪರಿಣಾಮವಾಗಿ; ಮುಂದಿನ ವರ್ಷದ ಅಂದರೆ, 1946-47ರ ಧರ್ಮಸ್ಥಳ ಮೇಳದ ತಿರುಗಾಟ ತಂಡದಲ್ಲಿ ವಿವಿಧ ಪೌರಾಣಿಕ ಪ್ರಸಂಗಗಳಾದ ಅಭಿಮನ್ಯುಕಾಳಗ ದಲ್ಲಿ “ಸಾರಥಿ”, ಕುಶಲವ ದಲ್ಲಿ “ಲವ”, ಬಬ್ರುವಾಹನ ಕಾಳಗ ದಲ್ಲಿನ “ವೃಷಕೇತು” ಮೊದಲಾದ 2ನೇ ಪುಂಡುವೇಷಧಾರಿಯ ಪಾತ್ರ ನಿರ್ವಹಣೆ ಅಚ್ಚುಕಟ್ಟಾಗಿ ಮಾಡಿದರು.
ಹೀಗೆ ಬಿಡುವಿನ ಕಾಲದಲ್ಲಿ ಸತತ ಪರಿಶ್ರಮದ ಕಲಿಕೆಯಿಂದಾಗಿ ಮತ್ತು ಆಗ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ಶ್ರೀ ಮಂಜಯ್ಯ ಹೆಗ್ಗಡೆಯವರ ಆಶೀರ್ವಾದ ಪಡೆದು ಮೇಳದ ಸಂಚಾಲಕರೂ ಆಗಿದ್ದ ಕುರಿಯ ಶ್ರಿ ವಿಟ್ಠಲ ಶಾಸ್ತ್ರಿಗಳ ತಂಡದಲ್ಲಿ ಪಳಗಿ ರಂಗಪ್ರವೇಶಿಸಿದ ಶ್ರೀ ಕೋಳ್ಯೂರು ರಾಮಚಂದ್ರ ರಾಯರು ಯಕ್ಷಗಾನ ಕಲಾರಂಗದಲ್ಲಿ, ಸಾರಥಿಯಿಂದ ಅಭಿಮನ್ಯು, ಲವನಿಂದ ಕುಶ, ಮತ್ತು ವೃಷಕೇತುವಿನಿಂದ ಬಬ್ರುವಾಹನ ದಂತಹ ಪ್ರಮುಖ ಪಾತ್ರಧಾರಿಯಾಗಿ ಹಂತ-ಹಂತವಾಗಿ ಯಶಸ್ವಿಯ ಸಾಧನೆಯ ಹೆಜ್ಜೆಯನಿಟ್ಟು ಸಾಗುತ್ತಾ; ಯಕ್ಷ ಸಾಮ್ರಾಜ್ಯದಲ್ಲಿ ಯಕ್ಷಗಾನದ ರಾಣಿಯಾಗಿ ಮಿಂಚಿ-ಪ್ರಖ್ಯಾತಿಯನ್ನು ಪಡೆದರು. ಹಲವಾರು ಯಕ್ಷತಾರೆಗಳಿಗೆ ಗುರುವೂ ಆದರು.





ವಿಳಾಸ
ಕಲಾಪ್ರಸಾದ, ಅಂಚೆ ಇನ್ನಂಜೆ.
ಶಂಕರಪುರ, ಉಡುಪಿ ತಾಲೂಕು.
ಪಿನ್ ಕೋಡ್ 576122.
ಕರ್ನಾಟಕ ರಾಜ್ಯ. ಭಾರತ.
ಮಿಂಚಿನ ಅ೦ಚೆ
kollyurramachandrarao@gmail.com
ಮೊಬೈಲ್:
+91-8123709799
LEGAL INFORMATION
