“ಮರಳಿ-ಗೂಡಿಗೆ ” ಎಂಬ ಮಾತಿನಂತೆ , 1947 ರಿಂದ 3 ವರ್ಷಗಳ ಕಾಲ ಕಟೀಲು ಮೇಳದಲ್ಲಿದ್ದುಕೊಂಡು ಸೇವೆ ಸಲ್ಲಿಸಿದ ಕೊಳ್ಯೂರುರವರು, ತನ್ನ ಮೊದಲ ಗುರು ಎಂದೆನಿಸಿಕೊಂಡಿದ್ದ ಶ್ರೀಯುತ ಕುರಿಯ ವಿಟ್ಠಲ ಶಾಸ್ತ್ರಿಗಳ ಅಭಿಲಾಷೆಯಂತೆ,1950 ರಲ್ಲಿ ಶ್ರೀ ಧರ್ಮಸ್ಥಳ ಮೇಳವನ್ನು ಮರು ಸೇರ್ಪಡೆಗೊಂಡರು. ಈ ಮೇಳದ ಪ್ರಾರಂಭದ ತಿರುಗಾಟದಲ್ಲಿ ಮುಖ್ಯ ಪುಂಡುವೇಷಧಾರಿಯಾಗಿ ಕಾಣಿಸಿತೊಡಗಿದ ಇವರು ಕ್ರಮೇಣ ಮೇಳದ ಹಿರಿಯ ಸ್ತ್ರೀ ವೇಷ ಪಾತ್ರಧಾರಿ ಕಲಾವಿದರಾಗಿದ್ದ ಶ್ರೀ ಕರ್ಗಲ್ಲು ಸುಬ್ಬಣ್ಣ ಭಟ್ಟರ ಜೊತೆ ಸಖೀವೇಷವನ್ನು ನಿಭಾಯಿಸುತ್ತಾ ಬಂದರು. ಸುಮಾರು 12 ವರ್ಷಗಳ ಕಾಲ (1950 -1962) ಈ ಮೇಳದಲ್ಲಿ ಸೇವೆ ಸಲ್ಲಿಸುತ್ತಾ ಬಂದರು. ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಮನಸ್ಸಿನಿಂದ 1957 ರ ಸಮಯದಲ್ಲಿ ಆಗಿನ ನಾಟ್ಯಗುರು ಆಗಿದ್ದ ಮಾಸ್ಟರ್ ವಿಟ್ಠಲ್ ರವರಲ್ಲಿ ತರಭೇತಿ ಹೊಂದುವುದರ ಮೂಲಕ ನಾಟ್ಯ ಮತ್ತು ಅಂಗಿಕಾಭಿನಯವನ್ನು ಗಟ್ಟಿಗೊಳಿಸಿಗೊಂಡವರಿವರು. ಈ ಮೇಳದಲ್ಲಿ ಮುಖ್ಯ ಸ್ತ್ರೀ ವೇಷ ಪಾತ್ರಧಾರಿಯಾಗಿ ದಾಕ್ಷಾಯಿಣಿ (ದಕ್ಷಯಜ್ಞ), ಮೇನಕೆ (ಬ್ರಹ್ಮ ಕಪಾಲ) , ಮೋಹಿನಿ (ವಿಶ್ವಾಮಿತ್ರ) ಸತ್ಯಭಾಮೆ (ಶ್ರೀ ಕೃಷ್ಣ ಲೀಲೆ), ಸೀತೆ ( ಶ್ರೀ ಕೃಷ್ಣ ಪಾರಿಜಾತ) ಇತ್ಯಾದಿ ಪಾತ್ರಗಳನ್ನು ಕರಗತಮಾಡಿಕೊಳ್ಳುವಲ್ಲಿ ಯಶಸ್ವಿ ಹೆಜ್ಜೆಗಳನ್ನಿಡುತ್ತಾ ಮುಂದೆಂದಿಗೂ ಹಿಂದೇಟು ಹಾಕದೆ ಕಲಾಉತ್ತುಂಗಕ್ಕೇರಿದರು.