Responsive Menu
Add more content here...
ವ್ಯಕ್ತಿತ್ವ

ವ್ಯಕ್ತಿತ್ವ

ಅತ್ಯಂತ ಸಾತ್ವಿಕ ಹಾಗೂ ಮೃದು ಸ್ವಭಾವವನ್ನು ಕರಗತ ಮಾಡಿಸಿಕೊಂಡವರು. ವೃತ್ತಿಯಲ್ಲಿ ಉದಾಸೀನತೆ ತೋರಿದವರಲ್ಲ. ಸದಾ ಕಲಿಕೆ ಮತ್ತು ಚಟುವಟಿಕೆಗಳಲ್ಲಿ ತಲ್ಲೀನರಾಗಿರುವವರು. ನಿಜ ಜೀವನದಲ್ಲಿಯೂ ತನ್ನ ಭಾವಪೂರ್ಣ ಮಾತುಗಳಿಂದ ಯಾರ ಗೌರವಕ್ಕೂ ಧಕ್ಕೆಯಾಗದಂತೆ ನಡೆದುಕೊಳ್ಳುವವರಿವರು. ಬಹಳ ಶಿಸ್ತು, ಸಂಯಮ ಹಾಗೂ ಸಮಯಪ್ರಜ್ಞೆ ಯಿಂದ ಕೂಡಿದ ವ್ಯಕ್ತಿತ್ವ ಇವರದ್ದು. ಬೀಡಿ , ಸಿಗರೇಟು, ಅಥವಾ ಮಧ್ಯಪಾನ ದಂತಹ ಹವ್ಯಾಸವನ್ನು ಎಂದೂ ಸ್ವತಃ ರೂಢಿಸಿಕೊಂಡವರಲ್ಲ ; ಹಾಗೂ ಅವಕಾಶ ಕೊಟ್ಟವರೂ ಅಲ್ಲ. ಇದಕ್ಕೆಲ್ಲಾ ಕಾರಣ ಇವರು ಬೆಳೆದುಬಂದ ರೀತಿ, ಬಾಲ್ಯದ ಗುರುಗಳು ಮತ್ತು ಒಡನಾಡಿಗಳ ಮಾರ್ಗದರ್ಶನ ವೆಂದರೆ ತಪ್ಪಾಗಲಿಕ್ಕಿಲ್ಲ. ತನ್ನಲ್ಲಿದ್ದ ಯಕ್ಷಗಾನ ವಿದ್ವಾಂಸತನವನ್ನು ಮುಚ್ಚಿಡದೆ ಇತರ ಕಲಾಸಕ್ತರಿಗೂ ಹಂಚಿಕೊಳ್ಳುವ ಉದಾರ ವ್ಯಕ್ತಿತ್ವ ಇವರದಾಗಿದೆ. ಕಠಿಣ ಪರಿಶ್ರಮ ಸತತ ಅಭ್ಯಾಸಗಳನ್ನು ಹಾಗೂ ಕೆಲಸದಲ್ಲಿ ಬದ್ಧತೆಯನ್ನು ಮೈಗೂಡಿಸಿಕೊಂಡ ಸಾಧಕರಿವರು.

ನಿಲ್ಲದ ಪಯಣ

1947ರ ಧರ್ಮಸ್ಥಳ ಮೇಳದ ತಿರುಗಾಟ ಮುಗಿಸಿದ ಕೂಡಲೆ ಶ್ರೀಯುತ ಕಲ್ಲಾಡಿ ಕೊರಗ ಶೆಟ್ಟರ ಸಂಚಾಲಕತ್ವ ಕಟೀಲು ಮೇಳದ ಆಹ್ವಾನವನ್ನು ಸ್ವೀಕರಿಸಿದ ಕೋಳ್ಯೂರುರವರು ಆ ವರ್ಷದ ಮಳೆಗಾಲವಿಡೀ ಆ ಮೇಳದ ಸಹಸಂಚಾಲಕರಾಗಿದ್ದ ನೂಜಿಪ್ಪಾಡಿ ಶಂಕರ ನಾರಾಯಣಪ್ಪಯ್ಯ ರವರ ಮನೆಯಲ್ಲಿ ಸತತ ಅಭ್ಯಾಸದಲ್ಲಿಯೇ ಕಳೆದರು. ತಿರುಗಾಟ ಪ್ರಾರಂಭವಾದ ಕೂಡಲೇ, ಸುಯೋಗವೆಂಬಂತೆ ಕೋಳ್ಯೂರುರವರಿಗೆ ಅತಿಕಾಯ – ಇಂದ್ರಜಿತು, ಮೈರಾವಣ ಪ್ರಸಂಗಗಳಲ್ಲಿ “ ಲಕ್ಷ್ಮಣ” ನ ಪ್ರಧಾನ ಪಾತ್ರ ಮಾಡುವ ಅನಿರ್ವಾರ್ಯತೆ ಒದಗಿಬಂತು. ನೆಡ್ಲೆ ನರಸಿಂಹ ಭಟ್ಟರು, ಪಡ್ರೆ ಚಂದುರವರು, ಬಲಿಪ ಭಾಗವತರು ಮೊದಲಾದವರುಗಳ ಪ್ರಚೋದನೆ, ಸೂಚನೆ ಮತ್ತು ಪ್ರೊತ್ಸಾಹ ದಿಂದಾಗಿ ಈ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ ಸಂತೃಪ್ತಿ ಇವರಲ್ಲಿ ಮನೆಮಾಡಿತು. ಅಂತೆಯೇ, ಮುಂದೆ ಶ್ರೀ ಕೃಷ್ಣಲೀಲೆ ಪ್ರಸಂಗದಲ್ಲಿನ ಕೃಷ್ಣ, ಚಂದ್ರಹಾಸ, ಪ್ರಹ್ಲಾದ, ಇತ್ಯಾದಿ ಪಾತ್ರಗಳನ್ನು ನಿರ್ವಹಿಸಿ ಜನಮೆಚ್ಚುಗೆ ಪಡೆದರು. 3 ವರ್ಷಗಳ ಕಾಲ ಕಟೀಲು ಮತ್ತು ಇರಾ ಸೋಮನಾಥೇಶ್ವರ

ಯಕ್ಷಗಾನ ಮಂಡಳಿಯಲ್ಲಿ ಪಾತ್ರ ಮಾಡುತ್ತಿದ್ದಂತೆಯೆ; ಬಿಡುವಿನ ಅವಧಿಗಳಲ್ಲಿ ಕಾಲಹರಣ ಮಾಡದೆ ಶ್ರೀ ಉಚ್ಚಿಲ ಕೃಷ್ಣ ರಾವ್, ಕದ್ರಿ ಇವರಲ್ಲಿ ಭರತನಾಟ್ಯ ಅಭ್ಯಾಸ ಪ್ರಾರಂಭಿಸಿದರು. ಜೊತೆಗೆ ಸ್ತ್ರೀ ವೇಷ ಕುಣಿತದಲ್ಲಿಯೂ ಹೆಚ್ಚಿನ ತರಭೇತಿ ಪಡೆದು ಪರಿಣತಿ ಹೊಂದಿದರು. ಈ ಮೇಳದಲ್ಲಿದ್ದುಕೊಂಡು ಅಂದಿನ ಪ್ರಮುಖ ಸ್ತ್ರೀ ವೇಷ ಪಾತ್ರಧಾರಿಗಳಾಗಿದ್ದ ಶ್ರೀ ರಾಮಯ್ಯ ರೈಗಳು, ಅಡೂರು ರಾಮಚಂದ್ರ ಮಣಿಯಾಣಿ, ಮಂಕುಡೆ ಸಂಜೀವ ಶೆಟ್ಟರು, ಶ್ರೀ ರಾಮಚಂದ್ರ ಬಲ್ಯಾಯ ಇವರುಗಳೊಂದಿಗೆ ಸಖೀ ವೇಷಗಳನ್ನು ಮಾಡುತ್ತಾ, ಸ್ತ್ರೀ ಪಾತ್ರಗಳ ವಿವಿಧ ಆಯಾಮಗಳನ್ನು ಅರಿತುಕೊಂಡರು. ಪ್ರಮುಖವಾಗಿ ಸುಭಧ್ರಾ ಕಲ್ಯಾಣ, ಕೀಚಕ ವಧೆ, ರುಕ್ಮಿಣೀ ಸ್ವಯಂವರ, ಹರಿಶ್ಚಂದ್ರ ಚರಿತ್ರೆ ಇತ್ಯಾದಿ ಪ್ರಸಂಗಗಳಲ್ಲಿ ಅಭಿನಯಿಸುತ್ತಾ ಬಂದು ಮುಖ್ಯ ಪಾತ್ರಧಾರಿಯ ಅನುಪಸ್ಥಿತಿಯಲ್ಲಿ ಆ ಪಾತ್ರವನ್ನು ತಾನು ನಿಭಾಯಿಸುವ ಹಂತದ ಪರಿಪೂರ್ಣ ಪರಿಣತಿ ಹೊಂದಿದರು. ಅಲ್ಲದೇ ಸ್ವತಃ ತಾನೇ ಇತರ ಕಲಾವಿದರಿಗೆ ಹೆಜ್ಜೆ ನಾಟ್ಯ ಅಭ್ಯಸಿಸುವ ಹಂತಕ್ಕೆ ಬೆಳೆದು ನಿಂತರು.

ಮರಳಿ ಗೂಡಿಗೆ
“ಮರಳಿ-ಗೂಡಿಗೆ ” ಎಂಬ ಮಾತಿನಂತೆ , 1947 ರಿಂದ 3 ವರ್ಷಗಳ ಕಾಲ ಕಟೀಲು ಮೇಳದಲ್ಲಿದ್ದುಕೊಂಡು ಸೇವೆ ಸಲ್ಲಿಸಿದ ಕೊಳ್ಯೂರುರವರು, ತನ್ನ ಮೊದಲ ಗುರು ಎಂದೆನಿಸಿಕೊಂಡಿದ್ದ ಶ್ರೀಯುತ ಕುರಿಯ ವಿಟ್ಠಲ ಶಾಸ್ತ್ರಿಗಳ ಅಭಿಲಾಷೆಯಂತೆ,1950 ರಲ್ಲಿ ಶ್ರೀ ಧರ್ಮಸ್ಥಳ ಮೇಳವನ್ನು ಮರು ಸೇರ್ಪಡೆಗೊಂಡರು. ಈ ಮೇಳದ ಪ್ರಾರಂಭದ ತಿರುಗಾಟದಲ್ಲಿ ಮುಖ್ಯ ಪುಂಡುವೇಷಧಾರಿಯಾಗಿ ಕಾಣಿಸಿತೊಡಗಿದ ಇವರು ಕ್ರಮೇಣ ಮೇಳದ ಹಿರಿಯ ಸ್ತ್ರೀ ವೇಷ ಪಾತ್ರಧಾರಿ ಕಲಾವಿದರಾಗಿದ್ದ ಶ್ರೀ ಕರ್ಗಲ್ಲು ಸುಬ್ಬಣ್ಣ ಭಟ್ಟರ ಜೊತೆ ಸಖೀವೇಷವನ್ನು ನಿಭಾಯಿಸುತ್ತಾ ಬಂದರು. ಸುಮಾರು 12 ವರ್ಷಗಳ ಕಾಲ (1950 -1962) ಈ ಮೇಳದಲ್ಲಿ ಸೇವೆ ಸಲ್ಲಿಸುತ್ತಾ ಬಂದರು. ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಮನಸ್ಸಿನಿಂದ 1957ರ ಸಮಯದಲ್ಲಿ ಆಗಿನ ನಾಟ್ಯಗುರು ಆಗಿದ್ದ ಮಾಸ್ಟರ್ ವಿಟ್ಠಲ್ ರವರಲ್ಲಿ ತರಭೇತಿ ಹೊಂದುವುದರ ಮೂಲಕ ನಾಟ್ಯ ಮತ್ತು ಆಂಗಿಕಾಭಿನಯ ಗಟ್ಟಿಗೊಳಿಸಿಗೊಂಡವರಿವರು. ಈ ಮೇಳದಲ್ಲಿ ಮುಖ್ಯ ಸ್ತ್ರೀ ವೇಷ ಪಾತ್ರಧಾರಿಯಾಗಿ ದಾಕ್ಷಾಯಿಣಿ (ದಕ್ಷಯಜ್ಞ), ಮೇನಕೆ (ಬ್ರಹ್ಮ ಕಪಾಲ) , ಮೋಹಿನಿ (ವಿಶ್ವಾಮಿತ್ರ) ಸತ್ಯಭಾಮೆ (ಶ್ರೀ ಕೃಷ್ಣ ಲೀಲೆ), ಸೀತೆ ( ಶ್ರೀ ಕೃಷ್ಣ ಪಾರಿಜಾತ) ಇತ್ಯಾದಿ ಪಾತ್ರಗಳನ್ನು ಕರಗತಮಾಡಿಕೊಳ್ಳುವಲ್ಲಿ ಯಶಸ್ವಿ ಹೆಜ್ಜೆಗಳನ್ನಿಡುತ್ತಾ ಮುಂದೆಂದಿಗೂ ಹಿಂದೇಟು ಹಾಕದೆ ಕಲಾಉತ್ತುಂಗಕ್ಕೇರಿದರು.

ವಿಳಾಸ

ಕಲಾಪ್ರಸಾದ, ಅಂಚೆ ಇನ್ನಂಜೆ.
ಶಂಕರಪುರ, ಉಡುಪಿ ತಾಲೂಕು.
ಪಿನ್ ಕೋಡ್ 576122.
ಕರ್ನಾಟಕ ರಾಜ್ಯ. ಭಾರತ.

ಮಿಂಚಿನ ಅ೦ಚೆ

kollyurramachandrarao@gmail.com

ಮೊಬೈಲ್:

+91-8123709799